• ಲೇಖಕರು Rajendra Kumar K R
  • ಕಡೆಯ ಪರಿಷ್ಕರಣೆ 08-09-2022

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23ನೇ ಸಾಲಿನ ಅಂಕಪಟ್ಟಿ

img-icon

ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿ ಫಲಿತಾಂಶ 2022 ಅನ್ನು ಪ್ರಕಟಿಸಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ನೋಂದಾಯಿಸಿದ ಅಭ್ಯರ್ಥಿಗಳು 2 ನೇ ಪಿಯುಸಿ ಫಲಿತಾಂಶದ ಅಂಕಪಟ್ಟಿ (Marksheet) ಅನ್ನು ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.

ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಫಲಿತಾಂಶದ ತಾತ್ಕಾಲಿಕ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಲು ನೋಂದಣಿ ಸಂಖ್ಯೆಯಂತಹ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ಫಲಿತಾಂಶದ ಕೆಲವು ದಿನಗಳ ನಂತರ ಇಲಾಖೆಯು ಮೂಲ ಅಂಕಪಟ್ಟಿಗಳನ್ನು ಕಾಲೇಜುಗಳಿಗೆ ಕಳುಹಿಸುತ್ತದೆ. ಅಭ್ಯರ್ಥಿಗಳು ತಮ್ಮ ಕಾಲೇಜುಗಳಿಂದ ದ್ವಿತೀಯ ಪಿಯುಸಿ ಫಲಿತಾಂಶದ ಮೂಲ ಅಂಕಪಟ್ಟಿಯನ್ನು ಪಡೆದುಕೊಳ್ಳಬೇಕಾಗುತ್ತದೆ. 

ದ್ವಿತೀಯ ಪಿಯುಸಿ ಫಲಿತಾಂಶ 2022 ವಿವರಗಳು

ದ್ವಿತೀಯ ಪಿಯುಸಿ ಫಲಿತಾಂಶ 2022 ಅನ್ನು ಕರ್ನಾಟಕ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ್ದಾರೆ. ಒಟ್ಟಾರೆ ದ್ವಿತೀಯ ಪಿಯುಸಿ ಫಲಿತಾಂಶ 2022 ರ ಉತ್ತೀರ್ಣ ಶೇಕಡಾವಾರು 61.88 ರಷ್ಟಿದೆ. ಶೇಕಡಾ 68.72ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದರೆ, ಶೇಕಡಾ 55.22 ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. 2022ರ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6,83,563 ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು ಪಿಯುಸಿ ಫಲಿತಾಂಶ 2022ರ ಪ್ರಕಾರ ಕೇವಲ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶದ ಅಂಕಪಟ್ಟಿ ಪಡೆಯುವುದು ಹೇಗೆ? 

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬಳಿಕ ಅಂಕಪಟ್ಟಿ ಪಡೆಯುವುದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಎದುರಾಗುತ್ತದೆ. ವಿದ್ಯಾರ್ಥಿಗಳು ಈ ಬಗ್ಗೆ ಗೊಂದಲಕ್ಕೊಳಗಾಗದೆ ಸುಲಭವಾಗಿ ಅಂಕಪಟ್ಟಿ ಪಡೆಯಬಹುದಾಗಿದೆ. 

ಮುಂದಿನ ವಿದ್ಯಾಭ್ಯಾಸಕ್ಕಾಗಿ ಫಲಿತಾಂಶದ ಅಂಕಪಟ್ಟಿ ಬೇಕಾಗುತ್ತದೆ. ಫಲಿತಾಂಶ ಪ್ರಕಟವಾದ ನಂತರ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅಂಕಪಟ್ಟಿ ಬರುವುದು ತಡವಾದರೆ ಚಿಂತಿಸಬೇಕಾಗಿಲ್ಲ. ವಿದ್ಯಾರ್ಥಿಗಳು ತಮ್ಮ ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆದು ಅದನ್ನು ಕಾಲೇಜುಗಳ ದಾಖಲಾತಿ ಸೇರಿದಂತೆ ಹಲವು ಉದ್ದೇಶಗಳಿಗೆ ಬಳಸಿಕೊಳ್ಳಬಹುದು. 

ಫಲಿತಾಂಶ ಪ್ರಕಟವಾದ ಬಳಿಕ ನೀವು ಅಧ್ಯಯನ ಮಾಡಿದ ಕಾಲೇಜಿಗೆ ತೆರಳಿ ಅಲ್ಲಿ ನಿಮ್ಮ ತಾತ್ಕಾಲಿಕ ಅಂಕಪಟ್ಟಿಯನ್ನು ಪಡೆಯಬಹುದು. ಅಧ್ಯಯನ ಮಾಡಿದ ಕಾಲೇಜಿನ ಪ್ರಾಶುಂಪಾಲರು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅಂಕಪಟ್ಟಿಯನ್ನು ನೀಡುತ್ತಾರೆ. ಈ ತಾತ್ಕಾಲಿಕ ಅಂಕಪಟ್ಟಿಯು, ನಿಮ್ಮ ಮುಂದಿನ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಹಕಾರಿಯಾಗುತ್ತದೆ. ಈ ಅಂಕಪಟ್ಟಿಯಲ್ಲಿ ನೀವು ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಬರೆದು, ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯರು/ ಪ್ರಾಶುಂಪಾಲರು ಸಹಿ ಮಾಡಿ ನೀಡುತ್ತಾರೆ.

ಫಲಿತಾಂಶ ಪ್ರಕಟವಾಗಿ 15-20 ದಿನಗಳ ನಂತರ ಪರೀಕ್ಷಾ ಮಂಡಳಿಯಿಂದ ಅಂಕಪಟ್ಟಿ (Marks Card) ಬರುತ್ತದೆ. ಇದನ್ನು ನೀವು ಅಧ್ಯಯನ ಮಾಡಿದ ಕಾಲೇಜುಗಳಿಗೆ ತೆರಳಿ ಪಡೆಯಬಹುದಾಗಿದೆ. ಅಂಕಪಟ್ಟಿಯನ್ನು ಪಡೆದ ನಂತರ ಅದರಲ್ಲಿ ನಿಮ್ಮ ಹೆಸರು, ತಂದೆ ಮತ್ತು ತಾಯಿಯ ಹೆಸರು, ವಿಳಾಸ ಮತ್ತು ನೀವು ಪಡೆದ ಅಂಕಗಳು ಸರಿಯಾಗಿ ಇವೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ.

ದ್ವಿತೀಯ ಪಿಯುಸಿ ಫಲಿತಾಂಶ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ಫಲಿತಾಂಶಗಳ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – ಲಿಂಕ್‌

ಹಂತ 2: ಮುಖಪುಟದಲ್ಲಿರುವ “2ನೇ ಪಿಯುಸಿ ಫಲಿತಾಂಶ” ಲಿಂಕ್‌ಗೆ ಹೋಗಿ

ಹಂತ 3: ನೋಂದಣಿ ಸಂಖ್ಯೆಯಂತಹ ಲಾಗಿನ್ ವಿವರಗಳನ್ನು ನಮೂದಿಸಿ

ಹಂತ 4: ವಿವರಗಳನ್ನು ಸಲ್ಲಿಸಿ

ಹಂತ 5: ದ್ವಿತೀಯ ಪಿಯುಸಿ ಫಲಿತಾಂಶದ ತಾತ್ಕಾಲಿಕ ಅಂಕಪಟ್ಟಿಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

ಹಂತ 6: ಕರ್ನಾಟಕ ಪಿಯುಸಿ ಫಲಿತಾಂಶದ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯದ ದಾಖಲೆಗಾಗಿ ಅದರ ಮುದ್ರಿತ ಪ್ರತಿಯನ್ನು ಇಟ್ಟುಕೊಳ್ಳಿ.

ದ್ವಿತೀಯ ಪಿಯುಸಿ ಅಂಕಪಟ್ಟಿ: ಪರಿಶೀಲಿಸಬೇಕಾದ ವಿವರಗಳು

ದ್ವಿತೀಯ ಪಿಯುಸಿ ಅಂಕಪಟ್ಟಿಯಲ್ಲಿ ಮುದ್ರಿಸಲಾದ ಎಲ್ಲಾ ವಿವರಗಳನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಸೂಚಿಸಲಾಗಿದೆ. ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ, ವಿದ್ಯಾರ್ಥಿಗಳು ಯಾವುದೇ ವಿಳಂಬ ಮಾಡದೆ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವರದಿ ಮಾಡಬೇಕು. ಕರ್ನಾಟಕ 2ನೇ ಪಿಯುಸಿ ಅಂಕಪಟ್ಟಿಯಲ್ಲಿ ಪರಿಶೀಲಿಸಬೇಕಾದ ಪ್ರಮುಖ ವಿವರಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.

  • ಹೆಸರು
  • ನೋಂದಣಿ ಸಂಖ್ಯೆ 
  • ಪ್ರತಿ ವಿಷಯದಲ್ಲಿ ಪಡೆದ ಅಂಕಗಳು 
  • ಆಂತರಿಕ ಅಂಕಗಳು 
  • ಪ್ರಾಯೋಗಿಕ ಅಂಕಗಳು 
  • ತಾತ್ವಿಕ ಅಂಕಗಳು 
  • ಒಟ್ಟು ಅಂಕಗಳು 
  • ಭಾಗ A ವಿಷಯಗಳು 
  • ಭಾಗ B ವಿಷಯಗಳು
  • ಅಂತಿಮ ಫಲಿತಾಂಶ

ಡಿಜಿಲಾಕರ್‌ನಲ್ಲಿ ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಳ್ಳುವ ವಿಧಾನ

ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಅಂಕಪಟ್ಟಿಯನ್ನು ಡಿಜಿಲಾಕರ್‌ನಿಂದ ಕೂಡ ಡೌನ್‌ಲೋಡ್ ಮಾಡಬಹುದು. ಇದಕ್ಕಾಗಿ ವಿದ್ಯಾರ್ಥಿಗಳು ಡಿಜಿಲಾಕರ್‌ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಅಥವಾ ವೆಬ್‌ಸೈಟ್ (digilocker.gov.in) ಗೆ ಭೇಟಿ ನೀಡಬೇಕು. ಕರ್ನಾಟಕ ದ್ವಿತೀಯ ಪಿಯುಸಿ ಅಂಕಪಟ್ಟಿ ಡೌನ್‌ಲೋಡ್ ಮಾಡಲು ‘ಕರ್ನಾಟಕ ಸ್ಟೇಟ್ ಬೋರ್ಡ್ (ಪದವಿ ಪೂರ್ವ ಶಿಕ್ಷಣ ಇಲಾಖೆ)’ ಗೆ ಹೋಗಬೇಕು.

ದ್ವಿತೀಯ ಪಿಯುಸಿ ಮೂಲ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರದ ದ್ವಿಪ್ರತಿ ಅಥವಾ ತ್ರಿಪ್ರತಿಗಳನ್ನು ಪಡೆದುಕೊಳ್ಳುವ ಬಗ್ಗೆ:

ದ್ವಿತೀಯ ಪಿಯುಸಿ ಮೂಲ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರವನ್ನು ಕಳೆದುಕೊಂಡಲ್ಲಿ, ದ್ವಿಪ್ರತಿ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರವನ್ನು ಮತ್ತು ದ್ವಿಪ್ರತಿಯನ್ನು ಕಳೆದುಕೊಂಡಲ್ಲಿ ತ್ರಿಪ್ರತಿ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲು ಅವಕಾಶವಿದೆ. ವಿದ್ಯಾರ್ಥಿಗಳು ನಿಗದಿಪಡಿಸಿದ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ ಪೂರಕ ದಾಖಲೆಗಳ ಸಹಿತ (ಅನ್ವಯಿಸುವ ಶುಲ್ಕ ಪಾವತಿಸಿದ ಮೂಲ ಚಲನ್ ಸೇರಿ) ಅರ್ಜಿಯನ್ನು ಇಲಾಖೆಗೆ ಸಲ್ಲಿಸಿ ದ್ವಿಪ್ರತಿ ಅಥವಾ ತ್ರಿಪ್ರತಿ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

ದ್ವಿತೀಯ ಪಿಯುಸಿ ಮೂಲ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರದಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಬಗ್ಗೆ:

ದ್ವಿತೀಯ ಪಿಯುಸಿ ಮೂಲ ಉತ್ತೀರ್ಣ ಅಂಕಪಟ್ಟಿ ಪ್ರಮಾಣ ಪತ್ರದಲ್ಲಿನ ವಿದ್ಯಾರ್ಥಿಯ/ತಂದೆಯ/ತಾಯಿಯ ಹೆಸರುಗಳಲ್ಲಿನ ಹಾಗೂ ಇತರ ಸಣ್ಣ ಮಟ್ಟದ ಲೋಪದೋಷಗಳನ್ನು ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವಂತೆ ಸರಿಪಡಿಸಲು ವಿದ್ಯಾರ್ಥಿಯು ಇಲಾಖೆ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ ಪೂರಕ ದಾಖಲೆಗಳ ಸಹಿತ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬೇಕು. ಒಂದು ವೇಳೆ ವಿದ್ಯಾರ್ಥಿಯ/ತಂದೆಯ/ತಾಯಿಯ ಹೆಸರುಗಳಲ್ಲಿನ ಹಾಗೂ ಇತರೆ ಲೋಪದೋಷಗಳನ್ನು ಪೂರ್ಣ ಪ್ರಮಾಣದಲ್ಲಿ ತಿದ್ದುಪಡಿ ಮಾಡುವ ಹಾಗಿದ್ದರೆ, ನ್ಯಾಯಾಲಯದ ತೀರ್ಪಿನ (ಡಿಕ್ರಿ) ದೃಢೀಕರಿಸಿದ ಪ್ರತಿಯ ಜೊತೆಗೆ ವ್ಯಾಸಂಗ ಮಾಡಿದ ಕಾಲೇಜಿನಲ್ಲಿನ ವಿದ್ಯಾರ್ಥಿಗೆ ಸಂಬಂಧಿಸಿದ ದಾಖಲಾತಿ ವಹಿಯ ದೃಢೀಕರಿಸಿದ ಜೆರಾಕ್ಸ್‌ ಪ್ರತಿ ಹಾಗು ಇತರೆ ಪೂರಕ ದಾಖಲೆಗಳ ಸಹಿತ ನಿಗದಿಪಡಿಸಿರುವ ನಮೂನೆಯಲ್ಲಿ ಮಾಹಿತಿ ತುಂಬಿ ಸಹಾಯಕ ನಿರ್ದೇಶಕರು, ಅಂಕಪಟ್ಟಿ ಶಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, I8ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-18 ಇವರಿಗೆ ಅರ್ಜಿ ಸಲ್ಲಿಸಿ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಬಹುದು.

ದ್ವಿತೀಯ ಪಿಯುಸಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಸಾಮಾನ್ಯ ಸೂಚನೆಗಳು

1) ಪ್ರಮಾಣ ಪತ್ರ ಕಳೆದು ಹೋಗಿದ್ದಲ್ಲಿ ದ್ವಿತೀಯ/ತೃತೀಯ ಐಟಿಸಿ ಪ್ರತಿ ಪಡೆಯಲು 20 ರೂ.ಗಳ ಛಾಪಾ ಕಾಗದದಲ್ಲಿ ನ್ಯಾಯಾಲಯ ಅಥವಾ ನೋಟರಿಯಿಂದ ಅಫಿಡವಿಟ್ ಪಡೆದು ಮೂಲ ಪ್ರತಿ ಸಲ್ಲಿಸಬೇಕು. ಸದರಿ ಅಫಿಡವಿಟ್‌ನಲ್ಲಿ ನಾನು ಪರೀಕ್ಷಾ ಫಲಿತಾಂಶವನ್ನು ತಿರಸ್ಕರಿಸಿಲ್ಲವೆಂದು ಮತ್ತು ಯಾವುದೇ ಕಾಲೇಜಿನಲ್ಲಿ ಮೂಲ ಅಂಕಪಟ್ಟಿಯೊಂದಿಗೆ ದಾಖಲಾಗಿಲ್ಲವೆಂದು, ನನ್ನ ದ್ವಿತೀಯ ಪಿಯುಸಿ ಪರೀಕ್ಷೆಯ ಮೂಲ ಅಂಕಪಟ್ಟಿ ಪ್ರಮಾಣ ಪತ್ರ — ಕಾರಣದಿಂದ ಕಾಣೆಯಾಗಿದೆ ಎಂಬುದರ ಜೊತೆಗೆ ಸೆಲ್ಫ್ ಅಫಿಡವಿಟ್‌ನಲ್ಲಿ ನೀಡಿರುವ ಮಾಹಿತಿಗಳು ಸುಳ್ಳೆಂದು ಕಂಡುಬಂದಲ್ಲಿ ಅಂತಹ ಕ್ರಮ ಶಿಕ್ಷಾರ್ಹವಾಗಿರುವುದರಿಂದ ಭಾರತೀಯ ಸಂಹಿತೆ ಪ್ರಕಾರ ಶಿಕ್ಷೆಗೆ ಒಳಪಡಬಹುದೆಂದು, ಸದರಿ ದಂಡ ಅಫಿಡವಿಟ್‌ನಲ್ಲಿ ಮಾಹಿತಿ ಇದ್ದು ದೃಢೀಕರಣ ಮಾಡಿ ಒಂದು ವೇಳೆ ಪ್ರಮಾಣ ಪತ್ರ ದೊರೆತಲ್ಲಿ ದ್ವಿತೀಯ/ತೃತೀಯ ಪ್ರಮಾಣ ಪತ್ರವನ್ನು ಪದವಿ ಪೂರ್ವ ಶಿಕ್ಷಣದ ಪರೀಕ್ಷಾ ಮಂಡಳಿಗೆ ಹಿಂದಿರುಗಿಸುತ್ತೇನೆ ಎಂಬ ಅಂಶಗಳು ಕಡ್ಡಾಯವಾಗಿ ಇರಬೇಕು. ಅಫಿಡವಿಟ್ ಅನ್ನು ಅಭ್ಯರ್ಥಿ ಸ್ವತಃ ತಾನೇ ಪ್ರಮಾಣೀಕರಿಸಿ ಸಹಿ ಮಾಡಿರಬೇಕು. ಪೋಷಕರು ನೀಡುವ ಅಫಿಡವಿಟ್‌ ಅನ್ನು ತಿರಸ್ಕರಿಸಲಾಗುತ್ತದೆ.

2) ಪ್ರಮಾಣ ಪತ್ರವು ಕಳೆದಿದ್ದರೆ ಅದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಕುರಿತು ಸ್ವೀಕೃತಿಯ ಮೂಲ/ದೃಢೀಕೃತ ಪ್ರತಿ ಪಡೆದು ಸಲ್ಲಿಸಬೇಕು.

3) ಅಭ್ಯರ್ಥಿಯು ತನ್ನ ಅರ್ಜಿಯನ್ನು ಕಡ್ಡಾಯವಾಗಿ ಕಾಲೇಜಿನ ಪ್ರಾಂಶುಪಾಲರ ಸಹಿ ಹಾಗೂ ಮೊಹರಿನೊಂದಿಗೆ ಸಲ್ಲಿಸಬೇಕು.

4) ಅಂಕಪಟ್ಟಿ ಜೆರಾಕ್ಸ್ ಪ್ರತಿ ಅಥವಾ ಕಾಲೇಜಿನಲ್ಲಿರುವ ಫಲಿತಾಂಶ ಪಟ್ಟಿಯ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು.

5) ಅರ್ಜಿಯಲ್ಲಿನ ಎಲ್ಲಾ ಅಗತ್ಯ ವಿವರಗಳನ್ನು ಕಡ್ಡಾಯವಾಗಿ ತುಂಬಿರಬೇಕು. ಅಪೂರ್ಣ ಅರ್ಜಿಗಳನ್ನು ಕೂಡಲೇ ತಿರಸ್ಕರಿಸಲಾಗುತ್ತದೆ. 

6) ತಪ್ಪಾದ ಅಥವಾ ಸುಳ್ಳು ವಿವರಗಳನ್ನು ನೀಡಿದರೆ ಅರ್ಜಿದಾರರು ಹಾಗೂ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ.

7) ಯಾವುದೇ ಕಾರಣಕ್ಕೂ ಪ್ರಮಾಣ ಪತ್ರಗಳನ್ನು ಖುದ್ದಾಗಿ ನೀಡಲಾಗುವುದಿಲ್ಲ. ತುರ್ತು, ಇಪಿಪಿ ಅಂಚೆಯ ಮೂಲಕ ಸಂಬಂಧಿಸಿದ ಕಾಲೇಜಿಗೆ ರವಾನಿಸಲಾಗುತ್ತದೆ.

8) ಈ ಕೆಳಕಂಡಂತೆ ನಿರ್ದಿಷ್ಟಪಡಿಸಿದ ಶುಲ್ಕವನ್ನು ಲೆಕ್ಕಶೀರ್ಷಿಕ 0202-01-4021-07 ನಮೂದಿಸಿ ಪಾವತಿ ಮಾಡಿ ಮೂಲ ಚಲನ್‌ ಅನ್ನು ಅರ್ಜಿಯೊಂದಿಗೆ ಸಲ್ಲಿಸುವುದು. (ಬೆಂಗಳೂರಿನಲ್ಲಿ ಹಣ ಪಾವತಿ ಮಾಡುವವರು ಶಿವಾಜಿನಗರದ ಬೋರಿಂಗ್ ಹಾಸ್ಟೆಲ್ ಎದುರು, ಎಸ್.ಬಿ.ಐ, ಬಿಸಿನೆಸ್‌, ಬ್ರ್ಯಾಂಚ್‌ ಖಜಾನೆಯಲ್ಲಿ ಹಣ ಪಾವತಿ ಮಾಡಬೇಕು. ಬ್ಯಾ೦ಕಿನ ಬೇಡಿಕೆ ಹುಂಡಿಯನ್ನು (ಡಿಡಿ ಡಿಮ್ಯಾಂಡ್ ಡ್ರಾಫ್ಟ್) ಪರಿಗಣಿಸಲಾಗುವುದಿಲ್ಲ).

9) ಸದರಿ ಶುಲ್ಕವನ್ನು ಸರ್ಕಾರದ ಆದೇಶ ಸಂಖ್ಯೆ:ಇಡಿ195ಡಿಜಿಡಿ 2017,ಬೆಂಗಳೂರು, ದಿನಾಂಕ:20.03.2018 ನಿಗದಿಪಡಿಸಿದೆ.

ದ್ವಿತೀಯ ಪಿಯುಸಿ ಅಂಕಪಟ್ಟಿಗೆ ಸಂಬಂಧಿಸಿದಂತೆ ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರ. 1: ಉತ್ತೀರ್ಣ ಪ್ರಮಾಣಪತ್ರದಲ್ಲಿ ಲೋಪದೋಷಗಳಿದ್ದರೆ ತಿದ್ದುಪಡಿಗೆ ಅವಕಾಶವಿದೆಯೇ?

ಉತ್ತರ: ಹೌದು. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ದ್ವಿತೀಯ ಪಿಯು ಪರೀಕ್ಷೆ ಬರೆದು ಉತ್ತೀರ್ಣರಾದ ವಿದ್ಯಾರ್ಥಿಗಳ ಮೂಲ ಉತ್ತೀರ್ಣ ಪ್ರಮಾಣ ಪತ್ರಗಳಲ್ಲಿ ವಿದ್ಯಾರ್ಥಿಯ ಹೆಸರು/ತಂದೆ ಹೆಸರು/ತಾಯಿ ಹೆಸರುಗಳಲಿ ಲೋಪದೋಷಗಳಿದ್ದರೆ, ಅವುಗಳ ತಿದ್ದುಪಡಿಗೆ ಅವಕಾಶವಿರುತ್ತದೆ. 

ಪ್ರ. 2: ಮೂಲ ಉತ್ತೀರ್ಣ ಪ್ರಮಾಣ ಪತ್ರ ಕಳೆದುಕೊಂಡರೆ ಏನು ಮಾಡಬೇಕು?

ಉತ್ತರ: ಕೆಲವು ವಿದ್ಯಾರ್ಥಿಗಳು ಹಲವಾರು ಕಾರಣಗಳಿಂದಾಗಿ ತಮ್ಮ ಮೂಲ ಉತ್ತೀರ್ಣ ಪ್ರಮಾಣ ಪತ್ರಗಳನ್ನು ಕಳೆದುಕೊಂಡಿರಬಹುದು. ಇಂತಹ ವಿದ್ಯಾರ್ಥಿಗಳ ಮನವಿಯ ಮೇರೆಗೆ ದ್ವಿತೀಯ ಪಿಯುಸಿ ಉತ್ತೀರ್ಣ ಪ್ರಮಾಣ ಪತ್ರದ ದ್ವಿಪ್ರತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 

ಪ್ರ. 3: ವಿದ್ಯಾರ್ಥಿಯ/ ತಂದೆಯ/ತಾಯಿಯ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಲ್ಲಿ ಏನು ಮಾಡಬೇಕು?

ಉತ್ತರ: ಒಂದು ವೇಳೆ ವಿದ್ಯಾರ್ಥಿಯ/ ತಂದೆಯ/ ತಾಯಿಯ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಲ್ಲಿ, ಬದಲಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆದೇಶವನ್ನು ಪಡೆದು, ಸದರಿ ಆದೇಶದಂತೆ ಬದಲಾಗಿರುವ ತಿದ್ದುಪಡಿಗಳನ್ನು ಮೊದಲು ಒಂದರಿಂದ ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಶಾಲೆಗಳ ದಾಖಲಾತಿಗಳಲ್ಲಿ ಸರಿಪಡಿಸಿದ ನಂತರ, ಮುದ್ರಿತವಾದ ಎಸ್.ಎಸ್.ಎಲ್.ಸಿ ಪರಿಷ್ಕೃತ ಅಂಕಪಟ್ಟಿಯನ್ನು ಪಡೆದು, ಸದರಿ ತಿದ್ದುಪಡಿಗಳನ್ನು ಮೊದಲು ಕಾಲೇಜಿನ ದಾಖಲಾತಿ ವಹಿಯಲ್ಲಿ ತಿದ್ದುಪಡಿ ಮಾಡಿಸಬೇಕು. (ಇಂತಹ ಸಂದರ್ಭಗಳಲ್ಲಿ ನ್ಯಾಯಾಲಯದ ಆದೇಶದ ದೃಢೀಕೃತ ಪ್ರತಿಯನ್ನು ಪಡೆಯುವುದು ಕಡ್ಡಾಯ)

ಪ್ರ. 4: ತಿದ್ದುಪಡಿ ಮಾಡಬೇಕಿರುವ ದ್ವಿತೀಯ ಪಿಯುಸಿ ಮೂಲ ಉತ್ತೀರ್ಣ ಪ್ರಮಾಣ ಪತ್ರವನ್ನು ಲ್ಯಾಮಿನೇಷನ್ ಮಾಡಿಸಿದ್ದರೆ?

ಉತ್ತರ: ಇಂತಹ ಸಂದರ್ಭದಲ್ಲಿ ಸೂಕ್ತವಾದ ತಾಂತ್ರಿಕ ವಿಧಾನದಿಂದ ಲ್ಯಾಮಿನೇಷನ್ ತೆಗೆಸಿ ತಿದ್ದುಪಡಿಯ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ಮೂಲ ಉತ್ತೀರ್ಣ ಪ್ರಮಾಣ ಪತ್ರವು ಹಾಳಾಗುವ ಅಥವಾ ಹರಿದು ಹೋಗುವ ಸಾಧ್ಯತೆಗಳಿವೆ. 

ಪ್ರ. 5: ಉತ್ತೀರ್ಣ ಪ್ರಮಾಣ ಪತ್ರಗಳ ತಿದ್ದುಪಡಿಗೆ ನಿಗದಿಪಡಿಸಿರುವ ಶುಲ್ಕ ಎಷ್ಟು?

ಉತ್ತರ: ಶುಲ್ಕಕ್ಕೆ ಸಂಬಂಧಿಸಿದಂತೆ 2018ರ ಮಾರ್ಚ್/ಜೂನ್ ಉತ್ತೀರ್ಣ ಪ್ರಮಾಣ ಪತ್ರದ ತಿದ್ದುಪಡಿಗಾಗಿ ಮಾತ್ರ ರೂ.500 ಶುಲ್ಕವನ್ನು ನಿಗದಿಪಡಿಸಲಾಗಿದೆ. ಮಿಕ್ಕ ಯಾವುದೇ ಸಾಲಿನ ಉತ್ತೀರ್ಣ ಪ್ರಮಾಣ ಪತ್ರಗಳ ತಿದ್ದುಪಡಿಗಳಿಗೆ ಪ್ರಾಚಾರ್ಯರು ಕಾಲೇಜಿನ ಹೆಸರಿನಲ್ಲಾಗಲೀ, ಇಲಾಖೆಯ ಹೆಸರಿನಲ್ಲಾಗಲಿ ಯಾವುದೇ ಶುಲ್ಕಗಳನ್ನು ವಸೂಲಿ ಮಾಡುವಂತಿಲ್ಲ.

ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ ಪರೀಕ್ಷೆ 2023 ಕುರಿತ ಇತ್ತೀಚಿನ ಸುದ್ದಿ ಮತ್ತು ಅಪ್‌ಡೇಟ್‌ಗಳಿಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ. “ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿಯುಸಿ 2022-23ನೇ ಸಾಲಿನ ಅಂಕಪಟ್ಟಿ” ಕುರಿತ ಈ ಲೇಖನವು ನಿಮಗೆ ಉಪಯುಕ್ತಕರವಾಗಿತ್ತು ಎಂದು ನಾವು ಭಾವಿಸುತ್ತೇವೆ. ಇಂತಹ ಇನ್ನಷ್ಟು ಕಂಟೆಂಟ್‌ಗಾಗಿ Embibe ಪುಟಕ್ಕೆ ಭೇಟಿ ಮಾಡುತ್ತಿರಿ.

Embibe ನಲ್ಲಿ 3D ಕಲಿಕೆ, ಪುಸ್ತಕ ಪ್ರ್ಯಾಕ್ಟೀಸ್, ಟೆಸ್ಟ್‌ಗಳು ಮತ್ತು ಸಂದೇಹ ಪರಿಹಾರಗಳೊಂದಿಗೆ ಅತ್ಯುತ್ತಮ ಸಾಧನೆ ಮಾಡಿ